ಪತ್ರಕರ್ತ ಡ್ಯಾನಿಶ್ ಸಿದ್ಧಿಕಿಯನ್ನು ಬೇಕೆಂದೇ ಕ್ರೂರವಾಗಿ ಕೊಂದಿದ್ದರು ತಾಲಿಬಾನ್ ಉಗ್ರರು; ಶಾಕಿಂಗ್ ಮಾಹಿತಿ ಬಯಲು

ಪತ್ರಕರ್ತ ಡ್ಯಾನಿಶ್ ಸಿದ್ಧಿಕಿಯನ್ನು ಬೇಕೆಂದೇ ಕ್ರೂರವಾಗಿ ಕೊಂದಿದ್ದರು ತಾಲಿಬಾನ್ ಉಗ್ರರು; ಶಾಕಿಂಗ್ ಮಾಹಿತಿ ಬಯಲು

ನವದೆಹಲಿ: ಕೆಲವು ದಿನಗಳ ಹಿಂದೆ ಅಫ್ಘಾನಿಸ್ತಾನದ ಕಂದಹಾರ್​ನಲ್ಲಿ ನಡೆದ ಅಫ್ಘಾನ್​ ಸೇನಾ ಪಡೆ ಮತ್ತು ತಾಲಿಬಾನ್ ಉಗ್ರರ ನಡುವಿನ ಸಂಘರ್ಷದಲ್ಲಿ ಭಾರತದ ಪುಲಿಟ್ಜೆರ್ ಪ್ರಶಸ್ತಿ ಪುರಸ್ಕೃತ ಫೋಟೋ ಜರ್ನಲಿಸ್ಟ್​ ಡ್ಯಾನಿಶ್ ಸಿದ್ಧಿಕಿ (Danish Siddiqui) ಅವರನ್ನು ಹತ್ಯೆ ಮಾಡಲಾಗಿತ್ತು. ಆದರೆ, ಡ್ಯಾನಿಶ್ ಸಾವಿಗೂ ತಮಗೂ ಸಂಬಂಧವಿಲ್ಲ ಎಂದು ತಾಲಿಬಾನ್ ಹೇಳಿಕೆ ನೀಡಿತ್ತು. ಇದರಿಂದ ಡ್ಯಾನಿಶ್ ಸಿದ್ಧಿಕಿ ಸಾವನ್ನಪ್ಪಿದ್ದು ಹೇಗೆಂಬ ಪ್ರಶ್ನೆಗಳು ಉದ್ಭವಿಸಿದ್ದವು. ಈ ಕುರಿತು ಶಾಕಿಂಗ್ ಮಾಹಿತಿಯನ್ನು ಬಯಲು ಮಾಡಿರುವ ಅಮೆರಿಕದ ಪತ್ರಿಕೆಯೊಂದು, ಭಾರತದ ಫೋಟೋಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿಯನ್ನು ಪತ್ತೆಹಚ್ಚಿದ್ದ ತಾಲಿಬಾನ್ ಉಗ್ರರು ಆತನ ಮೇಲೆ ಗುಂಡಿನ ದಾಳಿ ನಡೆಸಿ, ಆತ ಪತ್ರಕರ್ತ ಎಂದು ಗೊತ್ತಾದ ನಂತರವೇ ಕೊಲೆ ಮಾಡಿದ್ದಾರೆ.ತಾಲಿಬಾನ್- ಅಫ್ಘಾನ್ ಸಂಘರ್ಷದಲ್ಲಿ ಅನಿರೀಕ್ಷಿತವಾಗಿ ಗುಂಡು ತಗುಲಿ ಡ್ಯಾನಿಶ್ ಸಾವನ್ನಪ್ಪಿಲ್ಲ, ಇದು ತಾಲಿಬಾನ್ ಉಗ್ರರು ಬೇಕೆಂದೇ ಮಾಡಿರುವ ಹತ್ಯೆ ಎಂದು ವರದಿ ಮಾಡಿದೆ.

ಅಫ್ಘಾನಿಸ್ತಾನದ ಸೇನಾಪಡೆಯ ಜೊತೆಗೆ ಕಂದಹಾರ್​ನಲ್ಲಿ ನಡೆದ ಯುದ್ಧದ ವೇಳೆ ವರದಿ ಮಾಡಲೆಂದು ಭಾರತದ ಫೋಟೋ ಜರ್ನಲಿಸ್ಟ್ ಡ್ಯಾನಿಶ್ ಸಿದ್ಧಿಕಿ ಹೋಗಿದ್ದರು. ಈ ವೇಳೆ ಸಂಘರ್ಷ ನಡೆಯುವಾಗ ಡ್ಯಾನಿಶ್ ಸಿದ್ಧಿಕಿ ಅಫ್ಘಾನ್ ಸೇನೆಯಿಂದ ಬೇರ್ಪಟ್ಟಿದ್ದರು. ಚೆಲ್ಲಾಪಿಲ್ಲಿಯಾಗಿದ್ದ ಸೇನೆಯ ನಡುವೆ ಸಂಘರ್ಷದ ಫೋಟೋ ತೆಗೆಯುತ್ತಿದ್ದ ಡ್ಯಾನಿಶ್ ಸಿದ್ಧಿಕಿ ಮೇಲೆ ಗುಂಡು ಹಾರಿಸಲಾಗಿತ್ತು. ಗಾಯಗೊಂಡಿದ್ದ ಡ್ಯಾನಿಶ್ ಸಿದ್ಧಿಕಿ ಮಸೀದಿಯೊಂದರಲ್ಲಿ ಅಡಗಿ ಕುಳಿತಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ಡ್ಯಾನಿಶ್ ಸಿದ್ಧಿಕಿಯನ್ನು ಸುತ್ತುವರೆದ ತಾಲಿಬಾನ್ ಉಗ್ರರು ಆತನನ್ನು ವಶಕ್ಕೆ ಪಡೆದಿದ್ದರು. ಈ ವೇಳೆ ಜೀವಂತವಾಗಿದ್ದ ಡ್ಯಾನಿಶ್ ಸಿದ್ಧಿಕಿಯ ಬಳಿಯಿದ್ದ ಐಡಿ ಕಾರ್ಡನ್ನು ಪರೀಕ್ಷಿಸಿದ್ದ ಅವರು ಬಳಿಕ ಆತನ ಮೇಲೆ ಗುಂಡು ಹಾರಿಸಿ ಪ್ರಾಣ ತೆಗೆದಿದ್ದಾರೆ. ಹೀಗಾಗಿ, ಇದು ತಿಳಿಯದೇ ನಡೆದ ಅಚಾತುರ್ಯವಲ್ಲ ಎಂದು ಅಮೆರಿಕದ ನಿಯತಕಾಲಿಕೆ ವರದಿ ಮಾಡಿದೆ.

ಮಸೀದಿಯಲ್ಲಿ ಗುಂಡೇಟಿನಿಂದ ಅಡಗಿ ಕುಳಿತಿದ್ದ ಪತ್ರಕರ್ತ ಸಿದ್ಧಿಕಿಯ ರಕ್ಷಣೆಗೆ ಓಡಿಬಂದ ಅಫ್ಘಾನ್ ಸೇನೆಯ ಸೈನಿಕರನ್ನು ಕೂಡ ತಾಲಿಬಾನ್ ಉಗ್ರರು ಕೊಂದಿದ್ದಾರೆ. ಡ್ಯಾನಿಶ್ ಸಿದ್ಧಿಕಿ ಓರ್ವ ಫೋಟೋಜರ್ನಲಿಸ್ಟ್​ ಎಂದು ಗೊತ್ತಾದ ನಂತರವೂ ಆತನ ತಲೆಗೆ ಬಲವಾಗಿ ಹೊಡೆದು, ನಂತರ ಗುಂಡು ಹಾರಿಸಿ ಕ್ರೂರವಾಗಿ ಹತ್ಯೆ ಮಾಡಲಾಗಿದೆ ಎಂದು ಅಮೆರಿಕದ ಮಾಧ್ಯಮ ತಿಳಿಸಿದೆ.

ದೇಶದ ವಾಸ್ತವ ಸ್ಥಿತಿಯನ್ನು ತೆರೆದಿಡುವ ಫೋಟೋಗಳ ಮೂಲಕ ಪ್ರಸಿದ್ಧಿ ಪಡೆದಿದ್ದ ಡ್ಯಾನಿಶ್​ ಸಾವಿಗೆ ಇಡೀ ದೇಶವೇ ಸಂತಾಪ ಸೂಚಿಸಿತ್ತು. ಅಫ್ಘಾನಿಸ್ತಾನ, ಅಮೆರಿಕ ದೇಶಗಳು ಕೂಡ ಈ ಘಟನೆಗೆ ಸಂತಾಪ ವ್ಯಕ್ತಪಡಿಸಿದ್ದವು. ಅದರೆ, ತಾಲಿಬಾನ್​ ಉಗ್ರರ ಗುಂಡೇಟಿಗೆ ಡ್ಯಾನಿಶ್​ ಸಿದ್ಧಿಕಿ (Danish Siddhiqui) ಬಲಿಯಾಗಿದ್ದಾರೆ ಎಂಬ ಸುದ್ದಿಯನ್ನು ತಾಲಿಬಾನ್ (Taliban) ತಳ್ಳಿಹಾಕಿತ್ತು. ಈ ಸಾವಿಗೆ ನಾವು ಕಾರಣರಲ್ಲ. ಡ್ಯಾನಿಶ್​ ಸಾವಿನ ವಿಷಯ ಕೇಳಿ ನಮಗೂ ಬೇಸರವಾಯಿತು ಎಂದು ನಾಟಕವಾಡಿತ್ತು. ಸಿದ್ಧಿಕಿ ಸಾವಿನ ಹಿಂದೆ ತಾಲಿಬಾನ್​ ಪಾತ್ರವೇನೂ ಇಲ್ಲ ಎಂದು ತಾಲಿಬಾನ್ ವಕ್ತಾರ ಜಬೀವುಲ್ಲಾ ಮುಜಾಹಿದ್ ಸ್ಪಷ್ಟಪಡಿಸಿದ್ದಾರೆ. ಡ್ಯಾನಿಶ್​ ಹೇಗೆ ಸತ್ತರು ಎಂಬುದು ನಮಗೆ ತಿಳಿದಿಲ್ಲ. ಗುಂಡಿನ ದಾಳಿಯ ವೇಳೆ ಯಾರು ಹಾರಿಸಿದ ಗುಂಡು ತಾಗಿ ಡ್ಯಾನಿಶ್​ ಸಾವನ್ನಪ್ಪಿದರೋ ಗೊತ್ತಿಲ್ಲ ಎಂದು ಅವರು ಹೇಳಿದ್ದರು.

ಯಾವುದೇ ಒಬ್ಬ ಪರ್ತಕರ್ತ ಯುದ್ಧ ನಡೆಯುತ್ತಿರುವ ವಲಯಕ್ಕೆ ಬರುತ್ತಿದ್ದಾರೆ ಎಂದರೆ ನಮಗೆ ಮೊದಲೇ ತಿಳಿಸಿರಬೇಕು. ಆಗ ನಾವು ಆ ವ್ಯಕ್ತಿಗೆ ಏನೂ ಹಾನಿಯಾಗದಂತೆ ಎಚ್ಚರ ವಹಿಸುತ್ತೇವೆ. ಆದರೆ, ಡ್ಯಾನಿಶ್​ ಸಿದ್ಧಿಕಿ ಎಂಬ ಪತ್ರಕರ್ತ ಆ ಜಾಗದಲ್ಲಿದ್ದ ಬಗ್ಗೆ ನಮಗೆ ಮಾಹಿತಿಯೇ ಇರಲಿಲ್ಲ. ಪತ್ರಕರ್ತ ಸಿದ್ಧಿಕಿ ಸಾವಿನ ವಿಷಯ ಕೇಳಿ ನಮಗೂ ಬೇಸರವಾಗಿದೆ. ಅವರ ಮನೆಯವರಿಗೆ ಈ ನೋವನ್ನು ಭರಿಸುವ ಶಕ್ತಿ ಸಿಗಲಿ ಎಂದು ಜಬೀವುಲ್ಲಾ ಮುಜಾಹಿದ್ ಹೇಳಿದ್ದರು. ಆದರೆ, ಇದು ತಾಲಿಬಾನ್ ಉಗ್ರರು ಉದ್ದೇಶಪೂರ್ವಕವಾಗಿ ಮಾಡಿದ ಹತ್ಯೆ ಎಂಬುದು ಈಗ ಬಯಲಾಗಿದೆ.