ನೀರಾವರಿ ಯೋಜನೆಗಾಗಿ ಜೆಡಿಎಸ್ ಪಾದಯಾತ್ರೆ; ಹೋರಾಟದ ಮೂಲಕವೇ ಜೆಡಿಎಸ್ ಅಧಿಕಾರಕ್ಕೆ ತರಲು ಪ್ರಯತ್ನ;ದೇವೇಗೌಡ

ನೀರಾವರಿ ಯೋಜನೆಗಾಗಿ ಜೆಡಿಎಸ್ ಪಾದಯಾತ್ರೆ; ಹೋರಾಟದ ಮೂಲಕವೇ ಜೆಡಿಎಸ್ ಅಧಿಕಾರಕ್ಕೆ ತರಲು ಪ್ರಯತ್ನ;ದೇವೇಗೌಡ
ಬೆಂಗಳೂರು: ಮೇಕೆದಾಟು ಹಾಗೂ ಮಹದಾಯಿ ಯೋಜನೆ ಅನುಷ್ಠಾನಕ್ಕಾಗಿ ಜೆಡಿಎಸ್ ಪಾದಯಾತ್ರೆ ನಡೆಸಲಿದೆ ಎಂದು ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು.
ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಮಂಡಲ ಅಧಿವೇಶನ ಮುಗಿದ ಬಳಿಕ ಈ ಪಾದಯಾತ್ರೆ ನಡೆಸಲು ನಿರ್ಧರಿಸಲಾಗಿದೆ. ಇದರ ಜೊತೆ ಆಲಮಟ್ಟಿ ನದಿ ನೀರು ಹಂಚಿಕೆ ಕುರಿತುಗಮನ ಸೆಳೆಯಲಾಗುವುದು. ನೀರೌರಿ ಯೋಜನೆಗಳಿಗಾಗಿ ಹಾಗೂ ನಾಡಿನ ಹಿತರಕ್ಷಣೆಗಾಗಿ ಹೋರಾಟ ಅನಿವಾರ್ಯವಾಗಿದೆ. ನನಗೆ ವಯಸ್ಸಾಗಿದ್ದರಿಂದ ಪಾದಯಾತ್ರೆ ಮಾಡಲು ಕಷ್ಟವಾಗುತ್ತದೆ. ಹೀಗಾಗಿ ಈ ಸಾಕೇಂತಿಕವಾಗಿ ಪಾದಯಾತ್ರೆಗೆ ಚಾಲನೆ ನೀಡುತ್ತೇನೆ ಎಂದು ಸ್ಪಷ್ಟಪಡಸಿದರು.
ಮೇಕೆದಾಟು, ಮಹದಾಯಿ ಯೋಜನೆ ಹಾಗೂ ಆಲಮಟ್ಟಿ ಅಣೆಕಟ್ಟೆ ವಿಚಾರಗಳು ನೆರೆ ರಾಜ್ಯಗಳೊಂದಿಗೆ ವಿವಾದಕ್ಕೆ ಕಾರಣವಾಗಿವೆ. ರಾಜ್ಯದ ಹಿತ ದೃಷ್ಟಿಯಿಂದ ಈ ಹೋರಾಟ ಅನಿವಾರ್ಯವಾಗಿದ್ದು, ಜೆಡಿಎಸ್ ಆಟಕ್ಕೆ ಉಂಟು ಲೆಕ್ಕಕ್ಕೆ ಇಲ್ಲ ಎನ್ನುವವರಿಗೆ ಹೋರಾಟ ಮಾಡುವ ಮೂಲಕ ಜೆಡಿಎಸ್ ಅಧಿಕಾರಕ್ಕೆ ತರುವ ಸಂಕಲ್ಪ ಮಾಡುತ್ತೇವೆ. ಹೋರಾಟ ಮಾಡುವಾಗ ಸರ್ಕಾರದ ಮೇಲೆ ಆರೋಪ ಮಾಡುವುದಿಲ್ಲ. ನಾವು ಹೋರಾಟ ಮಾಡಿ ಪಕ್ಷ ಬಲವರ್ಧನೆ ಮಾಡಿ ಅಧಿಕಾರಕ್ಕೆ ತರಲು ತೀರ್ಮಾನ ಮಾಡಿದ್ದೇವೆ. ನಮಗೆ ಯಾರ ಮೇಲೂ ದ್ವೇಷವಿಲ್ಲ ಎಂದು ಹೇಳಿದರು.
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು ನೆಹರೂ-ವಾಜಪೇಯಿ ಹೆಸರಲ್ಲಿ ಪರಸ್ಪರ ವಾಗ್ದಾಳಿ ನಡೆಸಿದ ಕುರಿತು ಮಾತನಾಡಿದ ಅವರು, ಅಂಥವರ ಬಗ್ಗೆ ಹಾಗೆಲ್ಲ ಮಾತನಾಡಲೇ ಬಾರದು. ಹಾಗೆ ಮಾತನಾಡುವುದರಿಂದ ಅವರ ಪಕ್ಷದ ಇಮೇಜ್ ಹೆಚ್ಚಾಗುತ್ತದೆ ಎಂದು ಭಾವಿಸಿದ್ದರೆ ಅವರಿಗೆ ಭ್ರಮನಿರಸನ ಆಗುತ್ತದೆಯೇ ಹೊರತು ಮತ್ತೇನೂ ಆಗುವುದಿಲ್ಲ ಎಂದು ಹೇಳಿದರು.