85 ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಗಳು ಅಂತಿಮ: ಮತ್ತೊಂದು ಸಮೀಕ್ಷೆ ನಿರೀಕ್ಷೆ

ಬೆಂಗಳೂರು: ಅಭಿವೃದ್ಧಿ, ವರ್ಚಸ್ಸು, ನಿಕಟತೆ, ಗೆಲ್ಲುವ ಸಾಮರ್ಥ್ಯ ಆಧಾರದಲ್ಲಿ ಆಡಳಿತ ಬಿಜೆಪಿ 80-85 ವಿಧಾನಸಭೆ ಕ್ಷೇತ್ರಗಳಿಗೆ ಅಭ್ಯರ್ಥಿಗಳ ಪಟ್ಟಿ ಅಂತಿಮಗೊಳಿಸಿದೆ. ಪಕ್ಷದ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ರ್ಚಚಿಸಿ ಕೇಂದ್ರೀಯ ಚುನಾವಣೆ ಸಮಿತಿಗೆ ಶಿಫಾರಸು ಮಾಡುವ ಔಪಚಾರಿಕ ಪ್ರಕ್ರಿಯೆ ಬಾಕಿಯಿದೆ.
ಡಬಲ್ ಇಂಜಿನ್ ಸರ್ಕಾರದ ಪ್ರಯೋಜನ, ಒಂದಿಲ್ಲೊಂದು ಯೋಜನೆಗಳು ಜನರಿಗೆ ತಲುಪಿದ ಸಮಾಧಾನ, ವಿಜಯಸಂಕಲ್ಪ ರಥಯಾತ್ರೆಗಳಿಗೆ ಜನಸ್ಪಂದನೆ ಕಮಲಪಡೆ ಉತ್ಸಾಹ ಹೆಚ್ಚಿಸಿದೆ. ಪ್ರಧಾನಿ ನರೇಂದ್ರ ಮೋದಿ ಆದಿಯಾಗಿ ಕೇಂದ್ರ ನಾಯಕರ ನಿರಂತರ ಭೇಟಿಯು ಸಕಾರಾತ್ಮಕ ವಾತಾವರಣ ಸೃಷ್ಟಿಸಿದೆ. ಇದರಿಂದಾಗಿ ಹಲವು ಕ್ಷೇತ್ರಗಳಲ್ಲಿ ಆಕಾಂಕ್ಷಿಗಳ ಮಧ್ಯೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಅರ್ಜಿ, ಸ್ವಪರಿಚಯ ಪತ್ರ ಹಿಡಿದುಕೊಂಡು ಕಚೇರಿ, ಹಿರಿಯ ನಾಯಕರ ಮನೆಗೆ ಅಲೆದರೆ ಟಿಕೆಟ್ ಸಿಗುವ ಖಾತರಿ ಇಲ್ಲ, ಪಕ್ಷ ಇದನ್ನೊಪುಪವುದಿಲ್ಲ ಎಂಬ ಕಾರಣಕ್ಕೆ ಯಾರೊಬ್ಬರೂ ಈ ಸಾಹಸಕ್ಕೆ ಕೈಹಾಕಿಲ್ಲ. ಆದರೆ, ದೆಹಲಿಮಟ್ಟದ ನಾಯಕರ ಜತೆಗೆ ಉತ್ತಮ ಒಡನಾಟ, ಸಂಪರ್ಕ ಉಳ್ಳವರೊಂದಿಗೆ ಲಾಬಿ ಮಾಡುವ ಆಂತರಿಕ ಕಸರತ್ತಿಗೆ ಬರವಿಲ್ಲವೆಂದು ಮೂಲಗಳು ಹೇಳಿವೆ.
ನಿರೀಕ್ಷೆ, ಅನಿಶ್ಚಿತ: ವಿಧಾನಸಭೆ ಕ್ಷೇತ್ರವಾರು ಪಕ್ಷದ ಪರಿಸ್ಥಿತಿ, ಶಾಸಕರು ಹಾಗೂ ಆಕಾಂಕ್ಷಿಗಳ ಕುರಿತು ಜನಾಭಿಪ್ರಾಯ, ಕಾರ್ಯಕರ್ತರ ಒಲವು-ನಿಲುವು ತಿಳಿಯಲು ಉದ್ದೇಶಿತ ಸಮೀಕ್ಷೆ ಚಾಲ್ತಿಯಲ್ಲಿದೆ. ಸ್ಥೂಲ ಸಮೀಕ್ಷೆ ವರದಿಯು ಪಕ್ಷ ಮೇಲುಗೈ ಸಾಧಿಸುವ ಅಂಶವನ್ನು ಒಳಗೊಂಡಿದೆ. ಇದೇ ಮಾತು ಅಭ್ಯರ್ಥಿವಾರು ಅನ್ವಯಿಸಲು ಸಾಧ್ಯವಿಲ್ಲವೆಂಬ ಕಾರಣ ನಿಖರ ಮಾಹಿತಿಗೆ ಕಾಯುತ್ತಿದೆ. ಮೂರನೇ ಹಂತದ ಸಮೀಕ್ಷೆ ನೀಡಲಿರುವ ವರದಿ ಆಧರಿಸಿ ಸಂಭಾವ್ಯ ಅಭ್ಯರ್ಥಿಗಳ ಬಗ್ಗೆ ರಾಜ್ಯ ನಾಯಕರು ರ್ಚಚಿಸಿ, ಪಟ್ಟಿಯೊಂದನ್ನು ಕೇಂದ್ರ ಸಮಿತಿಗೆ ಕಳುಹಿಸಿ ತನ್ನ ಜವಾಬ್ದಾರಿಯಿಂದ ಮುಕ್ತರಾಗಲಿದ್ದಾರೆ. ಚುನಾವಣಾ ವೇಳಾಪಟ್ಟಿ ಪ್ರಕಟವಾದ ನಂತರ ಈ ಪ್ರಕ್ರಿಯೆಗೆ ಚಾಲನೆ ಸಿಗಲಿದೆ. ಇದರಿಂದಾಗಿ ರಾಜ್ಯ ನಾಯಕರು, ವರಿಷ್ಠರ ನಡೆಯತ್ತ ಆಕಾಂಕ್ಷಿಗಳು ದೃಷ್ಟಿನೆಟ್ಟು, ತಮಗೊಪ್ಪಿಸಿದ ಕೆಲಸವನ್ನು ನಿರ್ವಹಿಸುತ್ತಿದ್ದಾರೆ.\
ಯಾವುದೇ ಸೂತ್ರಗಳನ್ನು ರೂಪಿಸಿದರೂ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಗೆಲುವೊಂದೇ ಪ್ರಮುಖ ಮಾನದಂಡವಾಗಲಿದೆ ಎನ್ನುವುದು ತೆರೆದ ರಹಸ್ಯ. ರಾಜ್ಯದ ಒಟ್ಟು ಪರಿಸ್ಥಿತಿ ಪಕ್ಷ ರಾಜಕಾರಣದ ಗೆರೆ ಕೊರೆದು ನಿಂತಿಲ್ಲ. ಅಷ್ಟೇ ಅಲ್ಲ, ಮಿಷನ್ 150 ಗುರಿ ಸಾಧನೆಗಾಗಿ ಬೇಕಾದ ವ್ಯೂಹಾತ್ಮಕ ನಡೆ ಅನುಸರಿಸಲಾಗಿದೆ. ಸರ್ಕಾರದ ಜನಪ್ರಿಯತೆ ಹೆಚ್ಚಳ, ಪಕ್ಷದ ವರ್ಚಸ್ಸು ವೃದ್ಧಿಗೆ ಈ ತಂತ್ರಗಾರಿಕೆ ಸಾಥ್ ನೀಡಿದೆ. ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ಯಾವುದೇ 'ಮಾದರಿ'ಗಳ ಅನ್ವಯ ಅನಿಶ್ಚಿತವಾಗಿದೆ.
ಚಿತ್ರದುರ್ಗ: ಜಿಲ್ಲೆಯ ಮೊಳಕಾಲ್ಮೂರು ಹಾಗೂ ಚಳ್ಳಕೆರೆಯಲ್ಲಿ ಶುಕ್ರವಾರ ಜನಸಂಕಲ್ಪ ಯಾತ್ರೆ ನಡೆಸಿದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ಮತದಾರರ ಮನದ ಕದ ತಟ್ಟಿದರು. ಭಾಷಣದುದ್ದಕ್ಕೂ ಅಭಿವೃದ್ಧಿಯ ಮಂತ್ರ ಜಪಿಸಿದ ಅವರು, ವ್ಯಾಪಾರೀಕರಣ ಮತ್ತು ರಾಷ್ಟ್ರ ಮಟ್ಟದಲ್ಲಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕವನ್ನು ನಂ.1 ಸ್ಥಾನಕ್ಕೆ ಬರುವಂತೆ ಮಾಡುವುದು ಡಬಲ್ ಎಂಜಿನ್ ಸರ್ಕಾರದ ಸಂಕಲ್ಪ ಎಂದು ಹೇಳಿದರು. ಸಂಪರ್ಕ ಕ್ಷೇತ್ರದಲ್ಲಿನ ಸಾಧನೆಗಳನ್ನು ಬಿಡಿಸಿಟ್ಟ ಅವರು ಶಿವಮೊಗ್ಗ ವಿಮಾನ ನಿಲ್ದಾಣ, ತುಮಕೂರು ಸಮೀಪ ಎಚ್ಎಎಲ್ ಏರ್ಪೋರ್ಟ್, ಬೆಳಗಾವಿ ಸಮೀಪ ರೈಲ್ವೆ ಡಿಪೋ, ಬೆಂಗಳೂರು-ಮೈಸೂರು ದಶರಥ ರಸ್ತೆಗಳನ್ನು ಉದಾಹರಿಸಿದರು. ಬಿಜೆಪಿ ವಿಕಾಸವಾದದ ಸಿದ್ಧಾಂತ. ಜಾತಿ ಮತ್ತು ಲಂಚತನದಲ್ಲಿ ಮುಳುಗಿದ ಕಾಂಗ್ರೆಸ್ಗೆ ದೇಶದ ಏಕತೆ, ಪ್ರಗತಿ ಬೇಕಾಗಿಲ್ಲ ಎಂದು ಟೀಕಿಸಿದರು. ಕೇಂದ್ರ ಸಚಿವ ಎ.ನಾರಾಯಣಸ್ವಾಮಿ, ಕಂದಾಯ ಸಚಿವ ಆರ್.ಅಶೋಕ್, ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಇತರರಿದ್ದರು.
ಹೊಂದಾಣಿಕೆ ರಾಜಕಾರಣ: ಪಕ್ಷದ ಸಂಘಟನಾ ಬಲ ರಾಜ್ಯದಲ್ಲಿ ಏಕರೂಪವಾಗಿಲ್ಲ. ಕ್ಷಿಪ್ರ ರಾಜಕೀಯ ಪಲ್ಲಟವು ಅಧಿಕಾರದ ಗದ್ದುಗೆ ಏರುವಂತೆ ಮಾಡಿದೆ. ಇದು ಸಾಲದೆಂಬಂತೆ 'ಹೊಂದಾಣಿಕೆ ರಾಜಕಾರಣ' ನೆಲೆಯೂರಿದೆ. ಮೇಲ್ನೋಟಕ್ಕೆ ಕಂಡುಬರುವ ಇಂತಹ ವ್ಯತ್ಯಾಸಗಳೇ ವರಿಷ್ಠರ ಕೈಕಟ್ಟಿ ಹಾಕಿದಂತಿದೆ. ಗುಜರಾತ್, ಉತ್ತರಪ್ರದೇಶ ಅಥವಾ ಇನ್ಯಾವುದೇ ಮಾದರಿ ಅನುಸರಿಸುವ ಸಾಧ್ಯತೆ ಕಡಿಮೆ. ಆದರೆ ಕ್ಷೇತ್ರ, ಪಕ್ಷದ ಕಾರ್ಯಕರ್ತರೊಂದಿಗೆ ಹೆಸರು ಕೆಡಿಸಿಕೊಂಡು, ಅಭಿವೃದ್ಧಿಯಲ್ಲೂ ವಿಫಲರಾದ ಕೆಲವು ಹಾಲಿ ಶಾಸಕರ ಟಿಕೆಟ್ ಭವಿಷ್ಯ ಡೋಲಾಯಮಾನ ಎಂದು ಮೂಲಗಳು ಹೇಳಿವೆ.
ಪರಿಸ್ಥಿತಿ ಅವಲೋಕನ: ಮಿಷನ್ 150 ಗುರಿ ಸಾಧನೆಗೆ ಜಾತಿ ಸಮೀಕರಣವೂ ಒಂದು ಪ್ರಬಲ ಅಸ್ತ್ರವಾಗಿದೆ. ಪರಿಶಿಷ್ಟ ಜಾತಿ ಪಂಗಡಗಳ ಮೀಸಲು ಹೆಚ್ಚಳ ಬಹಳಷ್ಟು ಕ್ಷೇತ್ರದ ಕೆಮಿಸ್ಟ್ರಿ ಬದಲಾಯಿಸಿದೆ. ಹಿಂದುಳಿದ ವರ್ಗಗಳ ಪೈಕಿ ಕೆಲವು ಸಮುದಾಯಗಳ ಬೇಡಿಕೆ ಈಡೇರಿಲ್ಲವೆಂಬ ಮುನಿಸು, ಇನ್ನಿತರ ಕಾರಣಗಳಿಗೆ ಸಿಟ್ಟು-ಸೆಡವು ಪ್ರದೇಶ, ಜಿಲ್ಲೆ, ಕ್ಷೇತ್ರಮಟ್ಟದಲ್ಲಿ ಪರಿಣಾಮಬೀರಿದೆ. ವಿವಿಧ ಮೂಲಗಳು, ಕ್ಷೇತ್ರ ಕಾರ್ಯದಿಂದ ವರಿಷ್ಠರು ಈ ಮಾಹಿತಿ ಸಂಗ್ರಹಿಸಿದ್ದಾರೆ. ಬದಲಾದ ಒಟ್ಟು ಪರಿಸ್ಥಿತಿಯ ಅವಲೋಕನ ಮಾಡುತ್ತಿದ್ದು, ಮುಂದಿನ ನಡೆ ಕುತೂಹಲ ಕೆರಳಿಸಿದೆ. ದಾವಣಗೆರೆಯಲ್ಲಿ ಮಾ.25ರಂದು ನಡೆಯಲಿರುವ ವಿಜಯಸಂಕಲ್ಪ ಯಾತ್ರೆ ಮಹಾಸಂಗಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಸುಳಿವು ನೀಡುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಕುಣಿಯಲು ಬಾರದವ ನೆಲ ಡೊಂಕೆಂಬಂತೆ ವಿದೇಶಕ್ಕೆ ತೆರಳಿ ಭಾರತದ ಕುರಿತು ರಾಹುಲ್ ಗಾಂಧಿ ಹಗುರವಾಗಿ ಮಾತನಾಡಿದ್ದಾರೆ. ರಾಷ್ಟ್ರದಲ್ಲಿ ತುರ್ತು ಪರಿಸ್ಥಿತಿ ಹೇರಿ ಜನರಿಗೆ ತೊಂದರೆ ನೀಡಿದವರು ಈಗ ದೊಡ್ಡ ದೊಡ್ಡ ಭಾಷಣ ಮಾಡುತ್ತಿದ್ದಾರೆ.
| ಜೆ.ಪಿ.ನಡ್ಡಾ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ
ಬೆಂಗಳೂರು: ವಿಧಾನಸಭೆ ಚುನಾವಣೆ ಹತ್ತಿರ ವಾಗುತ್ತಿರುವ ಹಿನ್ನೆಲೆಯಲ್ಲಿ ಪರಸ್ಪರರನ್ನು ಹೀಗೆಳೆಯಲು, ವಿವಿಧ ಸಮುದಾಯಗಳ ಎತ್ತಿಕಟ್ಟಲು ಪ್ರತ್ಯಕ್ಷ-ಅಪ್ರತ್ಯಕ್ಷ ಸ್ಪರ್ಧೆ ಶುರುವಾಗಿದೆ. ಪ್ರಬಲ ಸಮುದಾಯವೊಂದರ ಬಗ್ಗೆ ಲಘುವಾದ ಹೇಳಿಕೆಯು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೆಸರಿನಲ್ಲಿ ಹರಿದಾಡಿತು. ಇದೊಂದು ಸೃಷ್ಟಿಸಿದ ನಕಲಿ ಸಂದೇಶವೆಂದು ಗೊತ್ತಾಗುವ ವೇಳೆಗೆ ಪಕ್ಷದ ಬಗ್ಗೆ ತಪುಪ ಮಾಹಿತಿ ರವಾನೆಯಾಗಿದೆ. ಸಿ.ಟಿ.ರವಿ ಆದಿಯಾಗಿ ಅನೇಕರು ಅಂತಹ ಹೇಳಿಕೆ ನೀಡಿಲ್ಲವೆಂದು ಸ್ಪಷ್ಟಪಡಿಸಿ, ಸಾಬೀತುಪಡಿಸಲು ಸವಾಲೆಸೆದು ಪರಿಸ್ಥಿತಿ ತಿಳಿಗೊಳಿಸಲು ಕಸರತ್ತು ನಡೆಸಿದರು. ಈ ನಕಲಿ ಸಂದೇಶ ಹುಟ್ಟುಹಾಕಿದ ವಿವಾದ ತಣ್ಣಗಾಗುವ ಮುನ್ನವೇ ಬಿಜೆಪಿ ರಾಜ್ಯಾಧ್ಯಕ್ಷರ ಹೆಸರಿನಲ್ಲಿ 'ಬಿಜೆಪಿ ಕಚೇರಿಯೊಳಗೆ ಲಿಂಗಾಯತರ ಪ್ರವೇಶವಿಲ್ಲ'ವೆಂಬ ಸಂದೇಶ ಹಂಚಿಕೆಯಾಗಿದೆ. ಪಕ್ಷಕ್ಕೆ ನಿಕಟವಾಗಿರುವ ಸಮುದಾಯಗಳನ್ನು ದೂರ ಮಾಡುವ ತಂತ್ರಗಾರಿಕೆಯು ನಕಲಿ ಸಂದೇಶದ ತಿರುಳಾಗಿದ್ದು, ಇಂತಹ ಸಂದೇಶದ ಹಾವಳಿ ಆಡಳಿತ ಬಿಜೆಪಿಗೆ ಕಿರಿಕಿರಿಯಾಗಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ನ ವೋಟ್ ಬ್ಯಾಂಕ್, ಓಲೈಕೆ ರಾಜಕಾರಣಕ್ಕೆ ಬಿಜೆಪಿ ಬಲವಾದ ಪೆಟ್ಟು ನೀಡಿದೆ. ಅಷ್ಟೇ ಅಲ್ಲ, ವೀರಶೈವ-ಲಿಂಗಾಯತ ಸೇರಿ ಹಲವು ಸಮುದಾಯಗಳಿಗೆ ನಿಕಟವಾಗಿದೆ. ಈ ಬೆಳವಣಿಗೆಯಿಂದ ಕಂಗೆಟ್ಟಿರುವ ಕಾಂಗ್ರೆಸ್ ನಕಲಿ ಸಂದೇಶಗಳ ಹರಡುವ ಸಂಚು ಹೂಡಿದೆ ಎಂದು ಕೈಪಕ್ಷದ ವಿರುದ್ಧ ಕೆಂಡಾಮಂಡಲವಾಗಿದೆ. 'ಸುಳ್ಳೇ ಕಾಂಗ್ರೆಸ್ ಮನೆ ದೇವರು, ಅಪಪ್ರಚಾರವೊಂದೇ ಕೈಲಾಗದ ಕಾಂಗ್ರೆಸ್ಗೆ ಕಡೆಯ ಆಸರೆ' ಎಂಬ ಸಂದೇಶವನ್ನು ರಾಜ್ಯ ಬಿಜೆಪಿ ಹಂಚಿಕೊಂಡಿದೆ.
ಯಡಿಯೂರಪ್ಪ ನಮ್ಮ ನಾಯಕರು. ವಿ.ಸೋಮಣ್ಣ ಅವರೂ ಸಮಾನವಾಗಿ ಬೆಳೆದು ಬಂದಿದ್ದಾರೆ. ಇಬ್ಬರ ನಡುವೆ ಯಾವುದೇ ಮನಸ್ತಾಪ ಇಲ್ಲ. ನಮ್ಮಲ್ಲಿ 224 ಕ್ಷೇತ್ರಗಳ ಎಲ್ಲ ಅಭ್ಯರ್ಥಿಗಳೂ ಮುಖ್ಯಮಂತ್ರಿ ಸ್ಥಾನದ ಆಕಾಂಕ್ಷಿಗಳು.
| ಮುರುಗೇಶ್ ನಿರಾಣಿ ಸಚಿವ