ಸತೀಶ್ ಜಾರಕಿಹೊಳಿ ವಿರುದ್ಧ ಪ್ರತಿಭಟನೆಗೆ ಬಿಜೆಪಿ ಸಜ್ಜು: ಕಾಂಗ್ರೆಸ್ಗೆ ಹಿಗ್ಗಾಮುಗ್ಗಾ ತರಾಟೆ

ಬೆಂಗಳೂರು: 'ಹಿಂದೂ' ಪದದ ಅರ್ಥ ಅಶ್ಲೀಲ ಎಂದಿದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಸತೀಶ್ ಜಾರಕಿಹೊಳಿ ವಿರುದ್ಧ ಸಿಡಿದೆದ್ದಿರುವ ಬಿಜೆಪಿ, ರಾಜ್ಯಾದ್ಯಂತ ಪ್ರತಿಭಟನೆಗೆ ಸಜ್ಜಾಗಿದೆ. ಸತೀಶ್ ಜಾರಕಿಹೊಳಿಯ ಹೇಳಿಕೆ ಖಂಡಿಸಿ 'ನಾನು ಸ್ವಾಭಿಮಾನಿ ಹಿಂದು' ಎಂಬ ಘೋಷವಾಕ್ಯದೊಂದಿಗೆ ಅಭಿಯಾನ ಶುರು ಮಾಡಿದ್ದ ಕೇಸರಿ ಪಡೆ, ಬಳಿಕ 'ಹಿಂದೂ ವಿರೋಧಿ ಕಾಂಗ್ರೆಸ್' ಎಂದು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿತ್ತು.
ಹಿಂದೂಗಳಿಗೆ ಮತ್ತು ಶಿವಾಜಿ ಮಹಾರಾಜರಿಗೆ ಸತೀಶ್ ಜಾರಕಿಹೊಳಿ ಅವರು ಅವಮಾನ ಮಾಡಿದ್ದಾರೆ. ಮಾತ್ರವಲ್ಲ ಕ್ಷಮೆ ಕೂಡ ಕೇಳುವುದಿಲ್ಲ ಎಂದಿದ್ದಾರೆ. ಡಿ.ಕೆ.ಶಿವಕುಮಾರ್, ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಅವರೇ ಅವರೇ ಇದು ಸತೀಶ್ ಜಾರಕಿಹೊಳಿ ನಿಲುವು ಮಾತ್ರವಾ ಅಥವಾ ಕಾಂಗ್ರೆಸ್ನ ನಿಲುವು ಕೂಡ ಇದೇನಾ? ಎಂದು ಪ್ರಶ್ನಿಸಿದೆ. #ಹಿಂದೂವಿರೋಧಿಕಾಂಗ್ರೆಸ್ ಎಂದು ಸರಣಿ ಟ್ವೀಟ್ ಮಾಡಿರುವ ರಾಜ್ಯ ಬಿಜೆಪಿ, ಸಿದ್ದರಾಮಯ್ಯ ಅವರ ವಿರುದ್ಧವೂ ಆಕ್ರೋಶ ಹೊರಹಾಕಿದೆ.
ಅಳಿವಿನಂಚಿಗೆ ತಲುಪಿರುವ ಕಾಂಗ್ರೆಸ್ ಈಗ ಹಿಂದೂಗಳ ಧಾರ್ಮಿಕ ಭಾವನೆಗಳ ಕುರಿತು ಕಾಳಜಿ ವ್ಯಕ್ತಪಡಿಸುವ ನಾಟಕವಾಡುತ್ತಿದೆ. ಆದರೆ ಅಧಿಕಾರದಲ್ಲಿ ಇದ್ದಾಗ ಹಿಂದೂಗಳ ಮೇಲೆ @INCKarnataka ಮಾಡಿರುವ ದಬ್ಬಾಳಿಕೆಯನ್ನು ಜನರಿನ್ನೂ ಮರೆತಿಲ್ಲ, ಮರೆಯೋದೂ ಇಲ್ಲ. ಹಿಂದುತ್ವ ಅಂದರೆ ಜೀವನಶೈಲಿ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಹೀಗಿರುವಾಗ, ಸತೀಶ್ ಜಾರಕಿಹೊಳಿ ಹಿಂದೂ ಪದ ಅಶ್ಲೀಲ ಎನ್ನುವ ಮೂಲಕ ನ್ಯಾಯಾಲಯಕ್ಕೆ ಅಗೌರವ ತೋರಿದ್ದಾರೆ. ಅಷ್ಟೇ ಅಲ್ಲದೆ ಹಿಂದೂಗಳ ಮನಸ್ಸಿಗೆ ಘಾಸಿ ಮಾಡಿದ್ದಾರೆ. ಇದು @INCKarnataka ಪಕ್ಷದ ಕೋಮು ಸಂಸ್ಕೃತಿಯಲ್ಲದೆ ಮತ್ತೇನು? ಎಂದು ಬಿಜೆಪಿ ಪ್ರಶ್ನಿಸಿದೆ.ಕೋಮುವಾದ ಎನ್ನುವುದು @INCKarnataka ಗುರುತು. ಹಿಂದೂಗಳನ್ನು ಬರ್ಬರ ಹತ್ಯೆಗೈದ ದೇಶವಿರೋಧಿ ಟಿಪ್ಪುನನ್ನು ಸಿದ್ದರಾಮಯ್ಯ ತಲೆಮೇಲಿರಿಸಿ ಮೆರೆಸಿದರು. ಟಿಪ್ಪು ಜಯಂತಿ ಆಚರಿಸುವ ಮೂಲಕ ಕೋಮುವಾದವನ್ನು ಜೀವಂತವಾಗಿಡುತ್ತಾರೆ. ಇದು ಕಾಂಗ್ರೆಸ್ ಪಕ್ಷದ ಕೋಮು ಬಳುವಳಿಯಲ್ಲವೇ? ಸತೀಶ್ ಜಾರಕಿಹೊಳಿ ಹೇಳಿಕೆಯನ್ನು ಕಾಂಗ್ರೆಸ್ ಉಸ್ತುವಾರಿ, ಕೆಪಿಸಿಸಿ ಅಧ್ಯಕ್ಷರು ಖಂಡಿಸಿದ್ದಾರೆ. ಆದರೆ ಕಾರ್ಯಾಧ್ಯಕ್ಷರು ತನ್ನ ಮಾತನ್ನು ಹಿಂತೆಗೆದುಕೊಳ್ಳುವುದಿಲ್ಲ ಎಂದು ರಾಜಾರೋಷವಾಗಿ ಹೇಳಿದ್ದಾರೆ. ಉಸ್ತುವಾರಿ, ಅಧ್ಯಕ್ಷರೇ ನಿಮಗೆ ಧಮ್ ಇದ್ದರೆ ಕಾಂಗ್ರೆಸ್ ಕಾರ್ಯಾಧ್ಯಕ್ಷರ ರಾಜೀನಾಮೆ ಪಡೆಯಿರಿ ಎಂದು ಬಿಜೆಪಿ ಆಗ್ರಹಿಸಿದೆ.