ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳ ದಂಡು

ಮಲ್ಲಿಕಾರ್ಜುನ ಖರ್ಗೆ ನಿವಾಸಕ್ಕೆ ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳ ದಂಡು

ಬೆಂಗಳೂರು ;ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹೊತ್ತಿನಲ್ಲಿ ಎಐಸಿಸಿ ಅಧ್ಯಕ್ಷರಾಗಿ ನೇಮಕವಾಗಿರುವ ಮಲ್ಲಿಕಾರ್ಜುನ್ ಖರ್ಗೆ ಅವರು ಕರ್ನಾಟಕದ ಕಾಂಗ್ರೆಸ್‌ ಪಕ್ಷಕ್ಕೆ ಶಕ್ತಿ ಕೇಂದ್ರವೇ ಆಗಿದ್ದಾರೆ.

ಹೀಗೆ ಭಾವಿಸಿದವರ ಪೈಕಿ ಹಲವು ಕಾಂಗ್ರೆಸ್‌ ಟಿಕೆಟ್ ಆಕಾಂಕ್ಷಿಗಳು ಈಗಿನಿಂದಲೇ ಖರ್ಗೆ ಅವರ ಬೆನ್ನಿಗೆ ಬಿದ್ದಿದ್ದಾರೆ.

ಹೌದು, ಸೋಮವಾರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಬೆಂಗಳೂರಿನ ಸದಾಶಿವನಗರದ ನಿವಾಸಕ್ಕೆ ಕಾಂಗ್ರೆಸ್‌ ನಾಯಕರು ಹಾಗೂ ಕಾರ್ಯಕರ್ತರ ದಂಡೇ ಹರಿದು ಬಂತು. ಪಕ್ಷದ ಅತ್ಯುನ್ನತ ಹುದ್ದೆಗೇರಿದ ಖರ್ಗೆ ಅವರನ್ನು ಗೌರವಿಸುವ ನೆಪದಲ್ಲಿ ಮುಖಂಡರು ಮುಂಬರಲಿರುವ ವಿಧಾನಸಭೆ ಚುನಾವಣೆಗೆ ಈಗಿನಿಂದಲೇ ಟಿಕೆಟ್ ಸಿದ್ದತೆ ಮಾಡಿಕೊಳ್ಳುತ್ತಿರುವುದು ಕಂಡು ಬಂತು. ಹೀಗಾಗಿಯೇ ಈ ಭೇಟಿ ಕಾಂಗ್ರೆಸ್‌ ವಲಯದ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ.

ಮುಖಂಡರ ಭೇಟಿ ಹಿನ್ನೆಲೆಯಲ್ಲಿ ಮಧ್ಯಾಹ್ನ ದೆಹಲಿಗೆ ತೆರಳಬೇಕಿದ್ದ ಖರ್ಗೆಯವರು, ಸಂಜೆ ದೆಹಲಿಗೆ ತೆರಳಿದರು. ಆ ಮಟ್ಟಿಗೆ ಕಾಂಗ್ರೆಸ್ ಮುಖಂಡರು ಅವರಲ್ಲಿ ಭೇಟಿಯಾಗಬೇಕೆಂದು ವಿನಂತಿಸಿದ್ದರು. ಭೇಟಿಯಲ್ಲಿ ಕೆಲವರು ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡುವಂತೆ ದುಂಬಾಲು ಬಿದ್ದರು. ಪುತ್ರ ಪ್ರಕಾಶ್ ಜೊತೆ ಮಾಜಿ ವಿಧಾನಸಭಾಧ್ಯಕ್ಷ ಕೆ.ಬಿ.ಕೋಳಿವಾಡ, ಅಲ್ಲಂ ವೀರಭದ್ರಪ್ಪ, ಮಾರ್ಗರೇಟ್ ಆಳ್ವಾ ಸೇರಿ ನೂರಾರು ನಾಯಕರು ಖರ್ಗೆ ಭೇಟಿಗೆ ತೆರಳಿದ್ದರು.


ಮೂಲ ಕಾಂಗ್ರೆಸ್ಸಿಗರತ್ತ ಖರ್ಗೆ ಒಲವು

ಆದರೆ ಮಲ್ಲಿಕಾರ್ಜುನ್ ಖರ್ಗೆ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸೇರಿದಂತೆ ಮೂಲ ಕಾಂಗ್ರೆಸ್ಸಿಗರತ್ತ ಹೆಚ್ಚಿನ ಒಲವು ಹೊಂದಿದ್ದಾರೆ. ವಲಸೆ ಬಂದವರಿಗೆ ಸೊಪ್ಪ ಹಾಕುವುದಿಲ್ಲ ಎಂಬ ಗುಮಾನಿ ಈಗಾಗಲೇ ಕೇಳಿ ಬಂದಿವೆ. ಸಿದ್ದರಾಮೋತ್ಸವ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಹಾಗೂ ಖರ್ಗೆಯವರು ಅಸಮಾಧಾನ ವ್ಯಕ್ತಪಡಿಸಿದ್ದರು.

ಮೊದಲಿನಿಂದಲೇ ಸಿದ್ದರಾಮಯ್ಯ ಬಗ್ಗೆ ಖರ್ಗೆಯವರು ಅಷ್ಟಕಷ್ಟೇ ಎನ್ನಲಾಗುತ್ತಿದೆ. ಈ ಮಧ್ಯೆ ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯರ ಮಧ್ಯೆ ಎಲ್ಲವು ಸರಿ ಇಲ್ಲ. ಮುಖ್ಯಮಂತ್ರಿ ಸ್ಥಾನದ ಮೇಲೆ ಈ ಇಬ್ಬರು ನಾಯಕರು ಕಣ್ಣಿಟ್ಟಿದ್ದಾರೆ ಎಂಬೆಲ್ಲ ಮಾತುಗಳು ಇಂದಿಗೂ ಓಡಾಡುತ್ತಿವೆ. ಈ ಎಲ್ಲ ಕಾರಣಗಳಿಗಳಿಂದ ಖರ್ಗೆಯವರು ಮೂಲ ಕಾಂಗ್ರೆಸ್ಸಿಗರಿಗೆ ಮಣೆ ಹಾಕಬಹುದು ಎಂದು ಹೇಳಲಾಗುತ್ತಿದೆ.

ಪಕ್ಷ ಅಧಿಕಾರಕ್ಕೆ ತರಲು ಒಗ್ಗಟ್ಟಿನಿಂದ ಕೆಲಸ ಮಾಡಿ

ಈ ವೇಳೆ ಮಾತನಾಡಿದ ಮಲ್ಲಿಕಾರ್ಜುನ್ ಖರ್ಗೆಯವರು, ಪಕ್ಷ ನಾಯಕರು ಈಗಾಗಲೇ ಉತ್ತಮ ಕೆಲಸ ಮಾಡಿದ್ದಾರೆ. ಅವರ ಬೆಂಬಲ ನನಗಿದೆ. ಎಲ್ಲರೂ ಒಗ್ಗಟ್ಟಿನಿಂದ ಮುಂದೆ ಸಾಗಿದರೆ, ಮುಂಬರುವ ಚುನಾವಣೆಗಳಲ್ಲಿ ಗೆಲುವು ಕಾಂಗ್ರೆಸ್‌ ಪಾಲಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು ಈ ನಿಟ್ಟಿನಲ್ಲಿ ಎಲ್ಲರೂ ಕೆಲಸ ಮಾಡಬೇಕು ಎಂದು ಅವರು ತಿಳಿಸಿದ್ದಾರೆ.

ಯುವಕರು, ಮಹಿಳೆಯರಿಗೆ ಟಿಕೆಟ್

ಕೆ.ಬಿ. ಕೋಳಿವಾಡ ಮಾತನಾಡಿ, ಮಲ್ಲಿಕಾರ್ಜುನ್ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿದ್ದು, ಕಾಂಗ್ರೆಸ್‌ಗೆ ಇನ್ನಷ್ಟು ಶಕ್ತಿ ಬಂದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬಹುಮತ ಸಿಗಲಿದೆ. ನಮ್ಮಲ್ಲಿ ಯಾವುದೇ ಬಣ ರಾಜಕೀಯ, ಗುಂಪುಗಾರಿಕೆ ಇಲ್ಲ ಎಂದರು.

ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ಬಿಟ್ಟು ಪಕ್ಕಕ್ಕಾಗಿ ದುಡಿಯಬೇಕು. ಯುವಕರು, ಮಹಿಳೆಯರಿಗೆ ಟಿಕೆಟ್ ಕೊಡಿಸುವತ್ತ ಖರ್ಗೆ ಅವರು ಒಲವು ತೋರಿದ್ದಾರೆ. ರಾಜ್ಯದ ನಾಯಕರಿಗೆ ಖರ್ಗೆಯವರು ತಿಳಿ ಹೇಳಿದ್ದಾರೆ ಎಂದು ಕೋಳಿವಾಡ ತಿಳಿಸಿದರು. ತಮಗೆ ಹಾಗೂ ಪುತ್ರನಿಗೆ ಟಿಕೆಟ್ ನೀಡುವಂತೆ ಅವರು ಕೋರಿದರು.

ರಾಜ್ಯ ನಾಯಕರು ಖರ್ಗೆ ಸಲಹೆ, ಸೂಚನೆನಂತರ ಪ್ರತ್ಯೇಕವಾಗಿ ಸುದ್ದಿಗಾರರ ಜತೆ ಮಾತನಾಡಿದ ಶಾಸಕ ಪ್ರಿಯಾಂಕ್ ಖರ್ಗೆ, ರಾಹುಲ್ ಗಾಂಧಿ ಅವರ ಆಶಯದಂತೆ ರಾಜ್ಯದಲ್ಲಿ ಕಾಂಗ್ರೆಸ್ 150 ಸ್ಥಾನ ಗೆಲ್ಲಲು ಶ್ರಮಿಸುವಂತೆ ಎಐಸಿಸಿ ಮುಖ್ಯಸ್ಥರು ರಾಜ್ಯ ನಾಯಕರಿಗೆ ಸೂಚಿಸಿದ್ದಾರೆ. ಮುಂದಿನ (2023ರ) ಚುನಾವಣೆ ಅತ್ಯಂತ ಮಹತ್ವದ್ದಾಗಿದ್ದು, ಪಕ್ಷವನ್ನು ಅಧಿಕಾರಕ್ಕೆ ತರಲು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಇಬ್ಬರಿಗೂ ಖರ್ಗೆ ಹೇಳಿದ್ದಾರೆ ಎಂದು ತಿಳಿಸಿದರು.