ಬಿಜೆಪಿ ನಾಯಕರುಗಳಿಗೆ ನಿರ್ಮಲಾನಂದ ಶ್ರೀಗಳು ಬುದ್ಧಿ ಹೇಳಿದ್ದೆ ತಪ್ಪು: ಡಿ.ಕೆ. ಶಿವಕುಮಾರ್ ಹೇಳಿಕೆ

ಮಂಡ್ಯ: ಉರಿಗೌಡ ಮತ್ತು ನಂಜೇಗೌಡ ವಿಚಾರದಲ್ಲಿ ಬಿಜೆಪಿ ನಾಯಕರುಗಳಿಗೆ ನಿರ್ಮಲಾನಂದ ಸ್ವಾಮೀಜಿ ಅವರು ಬುದ್ಧಿ ಹೇಳಿದ್ದೆ ತಪ್ಪು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.
ಆದಿಚುಂಚನಗಿರಿ ಮಠದಲ್ಲಿಂದು ಮಾತನಾಡಿದ ಡಿಕೆಶಿ, ಉರಿಗೌಡ ಹಾಗೂ ನಂಜೇಗೌಡ ಬೇರೆ ಯಾರು ಅಲ್ಲ, ಸಿಟಿ ರವಿ ಮತ್ತು ಅಶ್ವಥ್ ನಾರಾಯಣ ಅವರೇ ಎಂದರು.
ನಾಳೆ ನೂರಕ್ಕೂ ಹೆಚ್ಚು ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಆಗಲಿದೆ. ಬಿಜೆಪಿ ನಾಯಕರಿಗೆ ಶ್ರೀಗಳು ಬುದ್ಧಿ ಹೇಳುವ ಅವಶ್ಯಕತೆ ಇಲ್ಲ. ಈ ಸಮಾಜ ಯಾರನ್ನು ಭಿಕ್ಷೆ ಬೇಡುವ ಅವಶ್ಯಕತೆ ಇಲ್ಲ. ಸಿಟಿ ರವಿ, ಅಶ್ವಥ್ ನಾರಾಯಣ ಹಾಗೂ ಶೋಭಾ ಕರಂದ್ಲಾಜೆ ಹೊಸ ಹೊಸ ಇತಿಹಾಸ ಬರೆಯುತ್ತಿದ್ದಾರೆ. ಮುನಿರತ್ನ ಒಬ್ಬ ಬ್ಯುಸಿನೆಸ್ ಮ್ಯಾನ್. ಆತ ನೂರಾರು ಸಿನಿಮಾ ಮಾಡಿಕೊಳ್ಳಲಿ. ಒಕ್ಕಲಿಗರಿಗೆ ಅರಗಿಸಿಕೊಳ್ಳುವ ಶಕ್ತಿ ಇದೆ. ಒಕ್ಕಲಿಗರ ಸಮುದಾಯಕ್ಕೆ ಕಳಂಕ ತರುವ ಕೆಲಸ ಮಾಡಲಾಗ್ತಿದೆ. ಆದರೆ ಒಕ್ಕಲಿಗರು ಇದರಿಂದ ಹಿಂಜರಿಯುವುದಿಲ್ಲ. ನಮ್ಮ ಸ್ವಾಮಿಗಳು ಅವರನ್ನು ಕರೆದು ಮಾತನಾಡಿದ್ದೆ ತಪ್ಪು. ಇದು ಸ್ವಾಭಿಮಾನದ ಪ್ರಶ್ನೆಯಾಗಿದೆ. ಸರ್ಕಾರದ ಭ್ರಷ್ಟಾಚಾರ ಮರೆಮಾಚಲು ಕಥೆ ಕಟ್ಟಿದ್ದಾರೆ ಎಂದು ಕಿಡಿಕಾರಿದರು.
ಸದ್ಯ ಪರಿಸ್ಥಿತಿಯಲ್ಲಿ ಬದುಕಿನ ಬಗ್ಗೆ ಯೋಚಿಸಬೇಕಿದೆ. ಎಲ್ಲ ವಸ್ತುಗಳ ಬೆಲೆ ಏರಿಕೆಯಾಗಿದೆ. ಅದರ ಬಗ್ಗೆ ಮಾತಾಡಬೇಕಿದೆ. ಸಮಸ್ಯೆಗಳಿಗೆ ಪರಿಹಾರ ನೀಡುವ ಕೆಲಸ ಮಾಡಬೇಕಿದೆ ಎಂದು ಹೇಳಿದರು. ಇದೇ ವೇಳೆ ಪಠ್ಯಕ್ಕೆ ಉರಿಗೌಡ ಹಾಗೂ ನಂಜೇಗೌಡ ವಿಷಯ ಸೇರಿಸುವ ವಿಚಾರವಾಗಿ ಮಾತನಾಡಿ, ಯಾವ ಪಠ್ಯನೂ ಇಲ್ಲ. ಎಲ್ಲ ಮೇಷ್ಟ್ರ್ರಗಳನ್ನು ಕೇಳೋಕೆ ಹೇಳಿ. ಅಶ್ವಥ್ ನಾರಾಯಣ್ ಹಾಗೂ ಸಿ.ಟಿ.ರವಿಗೆ ಅವರ ಮೇಷ್ಟ್ರು ಹೇಳ್ಕೊಟ್ಟಿದ್ರಾ ಕೇಳೊಕೆ ಹೇಳಿ ಎಂದು ಟಾಂಗ್ ನೀಡಿದರು.
ಸಿದ್ದರಾಮಯ್ಯ ಅವರು ಕೋಲಾರದ ಚುನಾವಣಾ ಕಣದಿಂದ ಹಿಂದೆ ಸರಿದ ವಿಚಾರವಾಗಿ ಪ್ರತಿಕ್ರಿಯಿಸಿ, ಯಾರು ಹಿಂದೆ ಸರಿಯುತ್ತಿಲ್ಲ. ಅವರು ಬಯಸಿದ ಕ್ಷೇತ್ರದಲ್ಲಿ ಸ್ಪರ್ಧೆಗೆ ಅವಕಾಶ ಮಾಡಿಕೊಡಲಾಗಿದೆ. ಕೋಲಾರ, ವರುಣ, ಬಾದಾಮಿ ಹಾಗೂ ಚಾಮುಂಡೇಶ್ವರಿ ಯಾವುದಾದರೂ ಆಯ್ಕೆ ಮಾಡಲಿ. ಅವರ ಅನುಕೂಲ ನೋಡಿಕೊಂಡು ತೀರ್ಮಾನ ಮಾಡಲಿ. ಎಲ್ಲಿ ತೀರ್ಮಾನ ಮಾಡ್ತಾರೋ ಅಲ್ಲೇ ಅವಕಾಶ ಕೊಡುತ್ತೇವೆ ಎಂದರು.
ಡಿಕೆ ಸುರೇಶ್ ಸ್ಪರ್ಧೆಗೆ ಹೈಕಮಾಂಡ್ ಒತ್ತಡ ವಿಚಾರವಾಗಿ ಪ್ರತಿಕ್ರಿಯಿಸಿ, ಡಿ.ಕೆ. ಸುರೇಶ್ ಸಂಸದರಾಗಿಯೇ ಇರಲಿ. ಡಿಕೆಸು ಇಚ್ಛೆ ಕೂಡ ಅದೇ ಇದೆ. ನಮ್ಮ ಅಭ್ಯರ್ಥಿಯನ್ನು ನಾವು ಗೆಲ್ಲಿಸಿಕೊಳ್ತೇವೆ. ಯಾರೆ ಅಭ್ಯರ್ಥಿ ಆದರೂ ಡಿ.ಕೆ. ಶಿವಕುಮಾರ್ ಹಾಗೂ ಡಿಕೆ ಸುರೇಶ್ ಅಭ್ಯರ್ಥಿ ಎಂದು ಮತ ಕೇಳ್ತೇವೆ. ಜನರು ನಮ್ಮ ಅಭ್ಯರ್ಥಿ ಗೆಲ್ಲಿಸುತ್ತಾರೆ ಎಂದು ತಿಳಿಸಿದರು.
ನಾರಾಯಣಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರವಾಗಿ ಮಾತನಾಡಿ, ನಾನು ಯಾರಿಗೂ ರಾಜಕೀಯವಾಗಿ ಹಾನಿ ಮಾಡುವುದಿಲ್ಲ. ಈ ವಿಚಾರವನ್ನು ನಾವು ನಾರಾಯಣಗೌಡರನ್ನೇ ಕೇಳಬೇಕು ಎಂದರು. (ದಿಗ್ವಿಜಯ ನ್ಯೂಸ್)