ನಾನು ಹಿಂದೂ ರಾಮಯ್ಯ ಕೃತಿ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥ: ಡಾ.ವೋಡೆ ಪಿ.ಕೃಷ್ಣ

ನಾನು ಹಿಂದೂ ರಾಮಯ್ಯ ಕೃತಿ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥ: ಡಾ.ವೋಡೆ ಪಿ.ಕೃಷ್ಣ

ಬೆಂಗಳೂರು, ಅ.27- ನಾನು ಹಿಂದೂ ರಾಮಯ್ಯ ಕೃತಿಯು ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ಪರಾಮರ್ಶನ ಗ್ರಂಥವಾಗಲಿದೆ ಎಂದು ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ನಾಡೋಜ ಡಾ.ವೋಡೆ ಪಿ.ಕೃಷ್ಣ ಅಭಿಪ್ರಾಯಪಟ್ಟರು.

ಅಭಿಮಾನಿ ಪ್ರಕಾಶನ ಮತ್ತು ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಗಾಂಧಿ ಭವನದಲ್ಲಿಂದು ಹಮ್ಮಿಕೊಂಡಿದ್ದ ನಾನು ಹಿಂದೂ ರಾಮಯ್ಯ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಇದೊಂದು ಕನ್ನಡದ ಸೊಗಸಾದ ಕೃತಿಯಾಗಿದೆ. ಧಣಿವರಿಯದ ಕಾಯಕ ಯೋಗಿ ಪಿ.ರಾಮಯ್ಯ ಪತ್ರಿಕೋದ್ಯಮದ ದೃವತಾರೆಯಾಗಿದ್ದಾರೆ. ಇದುವರೆಗೂ ಅವರನ್ನು ಕಡೆಗಣಿಸಿ ಯಾರೂ ಮಾತನಾಡಿದ್ದನ್ನು ನೋಡಿಲ್ಲ. ರಾಮಯ್ಯ ಅವರು ಗಾಂಧಿ ಮನಸ್ಕರು ಅವರ ಕೃತಿ ಗಾಂಧಿ ಭವನದಲ್ಲಿ ಮುಖ್ಯಮಂತ್ರಿಯಿಂದ ಲೋಕಾರ್ಪಣೆಗೊಂಡಿದ್ದು ಶ್ರೇಷ್ಠ ಕೆಲಸ. ರಾಮಯ್ಯ ಅವರ ಕೆಲಸವೇ ಸಂದೇಶ ಎನ್ನಿಸುತ್ತಿದೆ. ಅವರು ನಡೆಯುವ ವಿಶ್ವಕೋಶ ಇದ್ದಂತೆ ಎಂದರು.

ಸಂಯುಕ್ತ ಕರ್ನಾಟಕದ ಸಂಪಾದಕ ಹುಣಸವಾಡಿ ರಾಜನ್ ಅವರು, ನಾನು ಹಿಂದೂ ರಾಮಯ್ಯ ಕೃತಿ ಕುರಿತು ಮಾತನಾಡಿ, ರಾಮಯ್ಯ ಅವರು ಅನುಭವದ ಕಥನವನ್ನು ದೃಶ್ಯಾಂತಗಳ ಮೂಲಕ 270 ಪುಟಗಳಲ್ಲಿ ಕೃತಿ ರಚಿಸಿದ್ದಾರೆ.

ವಸ್ತುವಿನ ಸಾಂಧ್ರತೆ ಭಾರವಾದಾಗ ಭಾಷೆ ಅದಕ್ಕೆ ಪೂರಕವಾಗುತ್ತದೆ. ಇಂಗ್ಲಿಷ್ ಪತ್ರಕರ್ತರಾಗಿ ಅದ್ಭುತ ಕೃತಿ ನೀಡಿರುವುದಕ್ಕೆ ಗೌರವ ವಂದನೆ ಸಲ್ಲಿಸಬೇಕು ಎಂದರು. ರಾಜಕಾರಣಿಗಳ ಒಡನಾಟ, ಅಧಿಕಾರಿಗಳ ಸಂಬಂಧ, ಸಾರ್ವಜನಿಕ ಹಿತಾಸಕ್ತಿಯನ್ನು ನೋಡುವ ರೀತಿ ಎಲ್ಲವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. 60 ವರ್ಷಗಳ ಸುದೀರ್ಘ ಅನುಭವವನ್ನು ಕೃತಿಯಲ್ಲಿ ಕಟ್ಟಿಕೊಟ್ಟಿದ್ದಾರೆ. ನಾನು ಹಿಂದೂ ರಾಮಯ್ಯ ಎನ್ನುವುದಕ್ಕಿಂತ ಬೇರೆ ಶಿರೋನಾಮೆ ಇದಕ್ಕೆ ಒಪ್ಪುತ್ತಿರಲಿಲ್ಲ.

ರಾಮಯ್ಯ ಅವರು ಸುಲಭವಾಗಿ ಸಿಗುವ ಸರಕಲ್ಲ. ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರೊಂದಿಗಿನ ಅನುಭವವನ್ನು ಕೇಳುವಾಗ ಸಮಗ್ರ ದೃಷ್ಟಿಯಿಂದ ಅವರು ವ್ಯಕ್ತಿ ನೋಡಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಜೊತೆಗಿನ ಒಡನಾಟ ಮತ್ತು ಸಂಬಂಧದ ಬಗ್ಗೆಯೂ ಸುದೀರ್ಘವಾಗಿ ಉಲ್ಲೇಖಿಸಿದ್ದಾರೆ.

ಎಸ್.ಆರ್.ಬೊಮ್ಮಾಯಿ ಪ್ರಕರಣದಲ್ಲಿ ಆಗಿನ ರಾಜ್ಯಪಾಲರು ಸಾರ್ವಜನಿಕವಾಗಿ ಖಳನಾಯಕರಾಗಿದ್ದರು ಎಂದು ಬಿಂಬಿತವಾಗಿದ್ದಾಗ ರಾಮಯ್ಯ ಕಾನೂನಿನಲ್ಲಿರುವ ಅವಕಾಶಗಳನ್ನು ಹೇಗೆ ಬಳಸಿಕೊಂಡಿದ್ದರು ಎಂದು ಉಲ್ಲೇಖಿಸಿ, ರಾಜ್ಯಪಾಲರನ್ನು ನಾಯಕರನ್ನಾಗಿ ಮಾಡಲಿಲ್ಲ, ಖಳನಾಯಕರನ್ನಾಗಿಯೂ ಮಾಡಲಿಲ್ಲ ಎಂದು ಕೃತಿ ಕುರಿತು ಸುದೀರ್ಘ ಮಾಹಿತಿ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ಅಭಿಮಾನಿ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಟಿ.ವೆಂಕಟೇಶ್ ಅವರು, ನಮ್ಮ ಸಂಸ್ಥೆಯ 38 ವರ್ಷಗಳ ಸುದೀರ್ಘ ಇತಿಹಾಸದಲ್ಲಿ ರಾಮಯ್ಯ ಅವರ ಈ ಕೃತಿ ಪ್ರಕಾಶನವೇ ದೊಡ್ಡ ಆಶೀರ್ವಾದ. ಅವರಲ್ಲಿ ಅಹಂ, ಕೋಪ ನೋಡಿಲ್ಲ. ಅವರ ಪುಸ್ತಕದ ಪ್ರಕಟಣೆ ನಮಗೆ ಪರಮ ಭಾಗ್ಯ ಎಂದರು.

ಅಭಿಮಾನಿ ಪ್ರಕಾಶನವು ಭಾರತದ 10 ಪ್ರಖ್ಯಾತ ಸಂಸ್ಥೆಗಳಲ್ಲಿ ಒಂದಾಗಿದ್ದು, 50 ಕೋಟಿ ರೂಪಾಯಿ ಯಂತ್ರೋಪಕರಣಗಳನ್ನು ಹೊಂದಿದೆ. ಪ್ರಕಟಣೆ ಅಥವಾ ಪುಸ್ತಕವನ್ನು ಮುದ್ರಿಸಿ ರಫ್ತು ಮಾಡುತ್ತಿದ್ದೇವೆ ಎಂದು ಹೇಳಿದರು.

ಸ್ವಾಗತ ಭಾಷಣ ಮಾಡಿದ ಗಾಂಧಿ ಸ್ಮಾರಕ ನಿಧಿಯ ಕೋಶಾಧ್ಯಕ್ಷರಾದ ಎಚ್.ಬಿ.ದಿನೇಶ್, ರಾಮಯ್ಯ ಅವರ ತಮ್ಮ ಆರು ದಶಕಗಳ ಅನುಭವವನ್ನು ಕನ್ನಡದಲ್ಲಿ ಬರೆದುಕೊಟ್ಟಿರುವುದು ವಿಸ್ಮಯ ಮೂಡಿಸಿದೆ. ಗಾಂಧಿ ಭವನಕ್ಕೂ ರಾಮಯ್ಯ ಅವರಿಗೂ ಅವಿನಾಭಾವ ಸಂಬಂಧ ಇದೆ. ಗಾಂಧಿ ಭವನದ ಬೆಳವಣಿಗೆಗೂ ಸಾಕಷ್ಟು ಶ್ರಮಿಸಿದ್ದರು ಎಂದು ಗುಣಗಾನ ಮಾಡಿದರು.

ಕಾರ್ಯಕ್ರಮದಲ್ಲಿ ರಾಮಯ್ಯ ದಂಪತಿಯನ್ನು ಅಭಿಮಾನಿ ಸಮೂಹದ ಪರವಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಭಿನಂದಿಸಿದರು. ಕಾರ್ಯಕ್ರಮದಲ್ಲಿ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶಣೈ, ಬೆಂಗಳೂರು ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಮಾಜಿ ಸಚಿವ ಚಲುವರಾಯಸ್ವಾಮಿ, ವಿಧಾನ ಪರಿಷತ್ ಸದಸ್ಯ ಕೊಂಡಜ್ಜಿ ಮೋಹನ್, ಬೆಂಗಳೂರು ನಗರ ಸಂಚಾರ ವಿಭಾಗದ ಜಂಟಿ ಪೊಲೀಸ್ ಆಯುಕ್ತ ರವಿಕಾಂತೇಗೌಡ,

ನಿವೃತ್ತ ಐಎಎಸ್ ಅಧಿಕಾರಿಗಳಾದ ಐ.ಎಂ.ವಿಠಲಮೂರ್ತಿ, ಶಂಕರಲಿಂಗೇಗೌಡ, ಬಿ.ಎನ್.ಕೃಷ್ಣಯ್ಯ, ಗುರುಪ್ರಸಾದ್, ನಿರ್ಮಾಪಕರಾದ ಸಾ.ರಾ.ಗೋವಿಂದು, ಹಿರಿಯ ಪತ್ರಕರ್ತರಾದ ಸಿದ್ದರಾಜು, ಪೊನ್ನಪ್ಪ, ಮಲ್ಲಪ್ಪ, ಪದ್ಮರಾಜ ದಂಡಾವತಿ, ಬಿ.ವಿ.ಮಲ್ಲಿಕಾರ್ಜುನಯ್ಯ, ಶೇಷ ಚಂದ್ರಿಕಾ, ಅರಕೆರೆ ಜಯರಾಂ, ಅ.ಚ.ಶಿವಣ್ಣ, ಬಿ.ವಿ.ಸತ್ಯನಾರಾಯಣ ಸೇರಿದಂತೆ ಅನೇಕ ಪತ್ರಕರ್ತರ ಬಳಗವೇ ನೆರೆದಿತ್ತು.