ದೆಹಲಿಯಲ್ಲಿ ಎಲೆಕ್ಟ್ರಿಕ್‌ ಎಕ್ಸ್‌ಪ್ರೆಸ್‌ವೇ; ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾಹಿತಿ

ದೆಹಲಿಯಲ್ಲಿ ಎಲೆಕ್ಟ್ರಿಕ್‌ ಎಕ್ಸ್‌ಪ್ರೆಸ್‌ವೇ; ಕೇಂದ್ರ ಸಚಿವ ನಿತಿನ್‌ ಗಡ್ಕರಿ ಮಾಹಿತಿ

ವದೆಹಲಿ: ರಾಷ್ಟ್ರ ರಾಜಧಾನಿಯ ಸಂಚಾರ ದಟ್ಟಣೆ ತಗ್ಗಿಸಲು ಕೈಗೊಂಡಿರುವ “ದೆಹಲಿ ನಗರ ವಿಸ್ತರಣೆ ರಸ್ತೆ ಯೋಜನೆ-2′ ಎಲೆಕ್ಟ್ರಿಕ್‌ ಎಕ್ಸ್‌ಪ್ರೆಸ್‌ ವೇ ಆಗಲಿದೆ ಎಂದು ಕೇಂದ್ರ ರಸ್ತೆ ಮತ್ತು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಘೋಷಿಸಿದರು.

ಈ ಬಗ್ಗೆ ಹೆಚ್ಚಿನ ವಿವರಣೆ ನೀಡಿದ ಅವರು, “ಈ ರಸ್ತೆಯಲ್ಲಿ ಎಲೆಕ್ಟ್ರಿಕ್‌ ಕೇಬಲ್‌ ಅಳವಡಿಸಲಾಗುವುದು. ರೈಲುಗಳಂತೆ ಎಲೆಕ್ಟ್ರಿಕ್‌ ಕೇಬಲ್‌ ಆಧಾರದಲ್ಲಿ ಬಸ್‌ಗಳು ಹಾಗೂ ಟ್ರಕ್‌ಗಳು ಚಲಿಸಲಿವೆ. ರಸ್ತೆಯ ಒಂದು ಪಥವನ್ನು ಇದಕ್ಕೆಂದೇ ಮೀಸಲಿಡಲಾಗುವುದು. ಒಂದರ ನಂತರ ಒಂದು ವಾಹನಗಳು ಈ ಎಲೆಕ್ಟ್ರಿಕ್‌ ಪಥದಲ್ಲಿ ಚಲಿಸಲಿದೆ,’ ಎಂದರು.

“ಈ ರೀತಿಯ ಎಲೆಕ್ಟ್ರಿಕ್‌ ಎಕ್ಸ್‌ಪ್ರೆಸ್‌ ವೇ ಜಗತ್ತಿನಲ್ಲೇ ಮೊದಲನೆಯದು. ಇದರಿಂದ ವಾಯು ಮಾಲಿನ್ಯ ಕಡಿಮೆಯಾಗುವ ಜತೆಗೆ ಸಂಚಾರ ದಟ್ಟಣೆ ಕೂಡ ತಗ್ಗಲಿದೆ. 75 ಕಿ.ಮೀ. ವಿಸ್ತೀರ್ಣದ ರಿಂಗ್‌ ರಸ್ತೆಯಲ್ಲಿ ಇದನ್ನು ಅಳವಡಿಸಲಾಗುವುದು,’ ಎಂದು ಹೇಳಿದರು.

“ಅಲ್ಲದೇ ಈ ಮಾರ್ಗದಲ್ಲಿ ಬಿಸಿನೆಸ್‌ ಕ್ಲಾಸ್‌ ಬಸ್‌ಗಳನ್ನು ಪರಿಚಯಿಸಲು ಯೋಜಿಸಿದ್ದೇವೆ. ಇವು ಎಲೆಕ್ಟ್ರಿಕ್‌ ಕೇಬಲ್‌ ಆಧಾರದಲ್ಲಿ ಚಲಿಸಲಿದೆ. ಒಳ್ಳೆಯ ಸೌಲಭ್ಯ ಮತ್ತು ಕೈಗೆಟಕುವ ದರದ ಟಿಕೆಟ್‌ ಇದ್ದರೆ, ಜನರು ಸ್ವಂತ ವಾಹನದ ಬದಲು ಸಾರ್ವಜನಿಕ ಸಾರಿಗೆ ಬಳಸುತ್ತಾರೆ,’ ಎಂದು ಗಡ್ಕರಿ ಹೇಳಿದರು.

“ಇದೇ ವೇಳೆ ದೆಹಲಿಯ ತ್ಯಾಜ್ಯ ಘಟಕಗಳಲ್ಲಿ ರಾಶಿ ರಾಶಿ ಬಿದ್ದಿರುವ ತ್ಯಾಜ್ಯವನ್ನು ವಿಂಗಡಿಸಿ, ರಸ್ತೆ ನಿರ್ಮಾಣಕ್ಕೆ ಬಳಸಲಾಗುವುದು. ಈ ರಸ್ತೆ ನಿರ್ಮಾಣಕ್ಕಾಗಿ 20 ಲಕ್ಷ ಟನ್‌ ಪ್ಲಾಸ್ಟಿಕ್‌ ತ್ಯಾಜ್ಯ ಉಪಯೋಗಿಸಲಾಗುವುದು,’ ಎಂದು ತಿಳಿಸಿದರು.