ಚುನಾವಣೆ ಹೊಸ್ತಿಲ್ಲಿ ಬಿರುಗಾಳಿ ಎಬ್ಬಿಸಿದ "ಉರಿಗೌಡ- ನಂಜೇಗೌಡ'

ಬೆಂಗಳೂರು : ಒಕ್ಕಲಿಗ ಪ್ರಾಬಲ್ಯದ ಹಳೆ ಮೈಸೂರು ಭಾಗದಲ್ಲಿ ಇದೇ ಮೊದಲ ಬಾರಿಗೆ ಐತಿಹಾಸಿಕ ಘಟನಾವಳಿ ಪ್ರೇರಿತ ವಿಚಾರಗಳು ಚುನಾವಣಾ ವಸ್ತುವಾಗಿ ಪರಿವರ್ತನೆಯಾಗುತ್ತಿದೆ. ಟಿಪ್ಪು ಸುಲ್ತಾನ್‌ನ್ನು ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧದಲ್ಲಿ ಕೊಂದವರು ಎನ್ನಲಾಗುತ್ತಿರುವ “ಉರಿಗೌಡ-ನಂಜೇಗೌಡ’ ಕಾಲ್ಪನಿಕ ವ್ಯಕ್ತಿಗಳ್ಳೋ ಅಥವಾ ವಾಸ್ತವವೋ ಎಂಬ ಚರ್ಚೆ ಈಗ ರಾಜಕೀಯ ವಲಯದಲ್ಲಿ ಬಿರುಗಾಳಿ ಎಬ್ಬಿಸಿದೆ.
ಪ್ರಧಾನಿ ನರೇಂದ್ರ ಮೋದಿ ಮಂಡ್ಯಕ್ಕೆ ಆಗಮಿಸಿದ ಸಂದರ್ಭದಲ್ಲಿ ಬಿಜೆಪಿ “ಉರಿಗೌಡ- ನಂಜೇಗೌಡ’ ಮಹಾದ್ವಾರವನ್ನು ಸ್ಥಾಪಿಸಿದ್ದು ಜೆಡಿಎಸ್ ಹಾಗೂ ಕಾಂಗ್ರೆಸ್ ನಾಯಕರನ್ನು ಕೆರಳಿಸಿತ್ತು. ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಇದರಿಂದ “ಒಕ್ಕಲಿಗ ಕುಲಕ್ಕೆ ಅವಮಾನ ಮಾಡಲಾಗಿದೆ’ ಎಂದು ಕುಮಾರಸ್ವಾಮಿ ಆಕ್ಷೇಪ ವ್ಯಕ್ತಪಡಿಸಿದ್ದರು.
ಆದರೆ ಇದ್ಯಾವುದಕ್ಕೂ ಬಗ್ಗದ ಬಿಜೆಪಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿದೆ. ಉರಿಗೌಡ-ನಂಜೇಗೌಡ ಅವರ ಪಾತ್ರವನ್ನು ಆಧಾರವಾಗಿಟ್ಟುಕೊಂಡು ಚಲನಚಿತ್ರ ನಿರ್ಮಾಣಕ್ಕೆ ಮುಂದಾಗಿರುವುದು ಈಗ ಭಾರಿ ವಿವಾದ ಸೃಷ್ಟಿಸಿದೆ. ತೋಟಗಾರಿಕಾ ಸಚಿವ ಮುನಿರತ್ನ ಈ ಸಿನಿಮಾ ನಿರ್ಮಾಣಕ್ಕಾಗಿ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದಾರೆ.
“ಉರಿಗೌಡ-ನಂಜೇಗೌಡ ಹಾಗೂ ನಂಜೇಗೌಡ-ಉರಿಗೌಡ’ ಎಂಬ ಎರಡು ಹೆಸರನ್ನು “ವೃಷಬಾದ್ರಿ ಪ್ರೊಡಕ್ಷನ್’ ಬ್ಯಾನರ್ ಅಡಿ ಮುನಿರತ್ನ ನೋಂದಾಯಿಸಿಕೊಂಡಿದ್ದಾರೆ. ಕುರುಕ್ಷೇತ್ರ ಸಿನಿಮಾ ಮಾದರಿಯಲ್ಲೇ ಅದ್ದೂರಿಯಾಗಿ ಈ ಚಿತ್ರನಿರ್ಮಾಣಕ್ಕೆ ಅವರು ಸಿದ್ಧತೆ ನಡೆಸಿದ್ದಾರೆ. ಈ ಬೆಳವಣಿಗೆಯಿಂದ ಮಾಜಿ ಸಿಎಂ ಕುಮಾರಸ್ವಾಮಿ ಮತ್ತೊಮ್ಮೆ ಕೆಂಡಾಮಂಡಲರಾಗಿದ್ದು, ಚರಿತ್ರೆಯನ್ನು ವಿರೂಪಗೊಳಿಸುವ ಈ ನಿರ್ಲಜ್ಜ ರಾಜಕಾರಣಕ್ಕೆ ಮೂಲ ಕಾರಣರು ಯಾರು, ಈ ಮುನಿರತ್ನಗೂ ಮಂಡ್ಯದ ಒಕ್ಕಲಿಗರಿಗೂ ಸಂಬಂಧವೇನು ಎಂದು ಪ್ರಶ್ನಿಸಿದ್ದಾರೆ. ಇನ್ನೊಂದೆಡೆ, ಸಚಿವ ಆರ್.ಅಶೋಕ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕುಮಾರಸ್ವಾಮಿಯವರಿಗೆ ತಿರುಗೇಟು ನೀಡಿದ್ದಾರೆ.
ಈ ವಿಚಾರ ಈಗ ಸಾಮಾಜಿಕ ಜಾಲತಾಣ ಹಾಗೂ ಟಿವಿ ವಾಹಿನಿಗಳಲ್ಲೂ ಪ್ರಧಾನ ಚರ್ಚೆಯ ವಿಚಾರವಾಗಿ ಮಾರ್ಪಟ್ಟಿದೆ. ಒಂದು ವರ್ಗ ಉರಿಗೌಡ, ನಂಜೇಗೌಡ ಕಾಲ್ಪನಿಕ ವ್ಯಕ್ತಿಗಳು ಎಂದು ಪ್ರತಿಪಾದಿಸುತ್ತಿದೆ. ಇದಕ್ಕೆ ಯಾವುದೇ ಐತಿಹಾಸಿಕ ಆಧಾರಗಳಿಲ್ಲ. ಟಿಪ್ಪುವನ್ನು ಈ ಇಬ್ಬರು ಯೋಧರು ಕೊಂದಿದ್ದರೆ ಮೈಸೂರು ಅರಸರು ಅವರ ಹೆಸರನ್ನು ಎಲ್ಲಿಯಾದರೂ ಸ್ಮರಿಸುತ್ತಿದ್ದರು. ಬ್ರಿಟಿಷ್ ದಾಖಲೆಗಳಲ್ಲೂ ಆ ಹೆಸರು ಉಲ್ಲೇಖವಾಗಿಲ್ಲ ಎಂದು ವಾದಿಸುತ್ತಿದ್ದರೆ, ಇನ್ನೊಂದು ವರ್ಗ ಅದರಲ್ಲೂ ವಿಶೇಷವಾಗಿ ಬಿಜೆಪಿಯ ಜತೆ ಗುರುತಿಸಿಕೊಂಡಿರುವ ಚಿಂತಕರು ಅಸ್ತಿತ್ವವನ್ನು ಒಪ್ಪುತ್ತಿದ್ದಾರೆ. ಇದೆಲ್ಲದರ ಮಧ್ಯೆ “ಟಿಪ್ಪು ನಿಜಕನಸು’ ನಾಟಕಕ್ಕೆ ಹಳೆ ಮೈಸೂರು ಭಾಗದಲ್ಲಿ ಭಾರಿ ಜನಸೇರುತ್ತಿದ್ದಾರೆ.
ಸಿದ್ದು ಮೌನ :
ಕುತೂಹಲಕಾರಿ ಸಂಗತಿ ಎಂದರೆ ಈ ವಿಚಾರಕ್ಕೆ ಸಂಬಂಧಪಟ್ಟಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಇದುವರೆಗೆ ತಮ್ಮ ನಿಲುವನ್ನು ವ್ಯಕ್ತಪಡಿಸಿಲ್ಲ. ಅವರ ಟ್ವೀಟರ್ ಖಾತೆಯಲ್ಲೂ ಈ ಬಗ್ಗೆ ಕಿಡಿಹೊತ್ತಿಸಿಲ್ಲ. ಕುಮಾರಸ್ವಾಮಿ ಹಾಗೂ ಬಿಜೆಪಿಯ ಒಕ್ಕಲಿಗ ನಾಯಕರ ಮಧ್ಯೆಯೇ ಈ ವಿವಾದ ತಿರುಗಣಿಯಾಡುತ್ತಿದೆ.
ಕುಮಾರಸ್ವಾಮಿ ಆತಂಕಕ್ಕೆ ಕಾರಣವೇನು ?
ಉರಿಗೌಡ ಹಾಗೂ ನಂಜೇಗೌಡ ವಿಚಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಈಗ ನಿಜಕ್ಕೂ ಇಕ್ಕಟ್ಟಿಗೆ ಸಿಲುಕಿದ್ದಾರೆ. ಈ ಎರಡು ವ್ಯಕ್ತಿಗಳ ವಿಚಾರ ಒಕ್ಕಲಿಗ ಸಮುದಾಯದಲ್ಲಿ ಒಂದು ಹಂತದ “ಅಸ್ಮಿತೆ’ಯ ಅಲೆ ಹುಟ್ಟಿ ಹಾಕಿದಂತೂ ಸುಳ್ಳಲ್ಲ. ಇದು ಬಲವಾಗಿಬಿಟ್ಟರೆ ಬಿಜೆಪಿಗೆ ರಾಜಕೀಯ ಲಾಭ ತಂದುಕೊಡಬಹುದೆಂಬ ಆತಂಕ ಒಂದೆಡೆ. ಇನ್ನೊಂದೆಡೆ ಮುಸ್ಲಿಂ ಸಮುದಾಯದ ಮತಗಳು ಕಾಂಗ್ರೆಸ್‌ಗೆ ಸಾರಾಸಗಟಾಗಿ ಬೀಳದಂತೆ ತಡೆಯಲು ನಡೆಸುತ್ತಿರುವ ಹೋರಾಟಕ್ಕೂ ಇದು ಅಡ್ಡಿಯುಂಟು ಮಾಡುತ್ತಿದೆ. ಟಿಪ್ಪು ಕೊಂದವರ ವೈಭವೀಕರಣ ನಡೆವಾಗ ಕುಮಾರಸ್ವಾಮಿ ಮೌನಕ್ಕೆ ಶರಣಾದರೆಂಬ ಆರೋಪ ಎದುರಾಗಬಹುದೆಂಬ ಚಿಂತೆ ಅವರನ್ನು ಕಾಡುತ್ತಿದೆ. ಈ ಕಾರಣಕ್ಕಾಗಿ ಕುಮಾರಸ್ವಾಮಿ ಇದೊಂದು ಕಾಲ್ಪನಿಕ ಪಾತ್ರಗಳು ಎಂದು ಪ್ರತಿಪಾದಿಸುತ್ತಿದ್ದಾರೆ.